ರಾಮಚಂದ್ರ, ಎಸ್
ಕಲಾತ್ಮಕ ಹಾಗೂ ವಾಣಿಜ್ಯಾತ್ಮಕ ಚಿತ್ರಗಳೆರೆಡರಲ್ಲೂ ಅತ್ಯುತ್ತಮ ಛಾಯಾಗ್ರಹಣ ನೀಡಿ ಹೆಸರಾದ ಛಾಯಾಗ್ರಾಹಕರಲ್ಲಿ ಎಸ್.ರಾಮಚಂದ್ರ ಒಬ್ಬರು. ದಕ್ಷಣ ಕನ್ನಡದ ಐತಾಳ್ ಕುಟುಂಬದ ರಾಮಚಂದ್ರ ಪುಣೆಯ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆಯಲ್ಲಿ ಛಾಯಾಗ್ರಹಣದಲ್ಲಿ ತರಬೇತಿ ಪಡೆದು ಪದವಿ ಪಡೆದವರು. ಜಿ.ವಿ.ಅಯ್ಯರ್ ಅವರ ಚಿತ್ರಸೃಷ್ಟಿಯ ಹಾದಿಯನ್ನೇ ಬದಲಾಯಿಸಿದ ``ವಂಶವೃಕ್ಷ ಚಿತ್ರದ ಸಹಾಯಕ ಛಾಯಾಗ್ರಾಹಕರಾಗಿ ಚಿತ್ರರಂಗ ಪ್ರವೇಶಿಸಿದ ಇವರು ಕಲಾತ್ಮಕ ಚಿತ್ರಗಳ ಮೌಲ್ಯವನ್ನು ಹೆಚ್ಚಿಸಿದವರಲ್ಲಿ ಕೂಡ ಒಬ್ಬರು.
ಗ್ರಹಣ, ಸಂಕಲ್ಪ, ಕಂಕಣ, ಚೋಮನದುಡಿ, ಋಷ್ಯಶೃಂಗ, ಮನೆ ಮೊದಲಾದ ಪ್ರಶಸ್ತಿ ವಿಜೇತ ಚಿತ್ರಗಳ ಛಾಯಾಗ್ರಾಹಕರಾಗಿ ಹೊಸ ಅಲೆಯಲ್ಲಿ ದುಡಿದ ಇವರು, ``ಗಂಧರ್ವಗಿರಿ, `ಹೊಂಬಿಸಿಲು, `ನ್ಯಾಯ ಗೆದ್ದಿತು, ``ಒಲವೇ ಬದುಕು, ``ಬೆತ್ತಲೆ ಸೇವೆ, ``ಮುದುಡಿದ ತಾವರೆ ಅರಳಿತು, ``ಬ್ಯಾಂಕರ್ ಮಾರ್ಗಯ್ಯ ಮತ್ತಿತರ ವಾಣಿಜ್ಯ ಚಿತ್ರಗಳಿಗೂ ಛಾಯಾಗ್ರಹಣ ಮಾಡಿ ಸೈ ಎನಿಸಿಕೊಂಡವರು.

1972-73ರಲ್ಲಿ ``ಸಂಕಲ್ಪ, 1974-75ರಲ್ಲಿ ``ಕಂಕಣ, 1976-77ರಲ್ಲಿ ``ಋಷ್ಯಶೃಂಗ, 1978-79ರಲ್ಲಿ ``ಗ್ರಹಣ'', 1989-90ರಲ್ಲಿ ``ಮನೆ ಹೀಗೆ ಐದುಬಾರಿ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಜ್ಯಪ್ರಶಸ್ತಿ ಪಡೆದ ಹಿರಿಮೆ ಎಸ್.ರಾಮಚಂದ್ರ ಅವರದು. 1976ರಲ್ಲಿ ``ಋಷ್ಯಶೃಂಗ ಚಿತ್ರದ ವರ್ಣ ಛಾಯಾಗ್ರಹಣಕ್ಕಾಗಿ ರಾಷ್ಟ್ರಪ್ರಶಸ್ತಿಯಿಂದಲೂ ಪುರಸ್ಕøತರಾದವರು. ರಾಮಚಂದ್ರ ಅವರ ಛಾಯಾಗ್ರಹಣ ಕಥೆಯ ವಿವಿಧ ಸನ್ನಿವೇಶಗಳ ಸತ್ಯವನ್ನು ಧ್ವನಿಸುವ ಶಕ್ತಿಪಡೆದಿದೆ. ನೆರಳು-ಬೆಳಕಿನ ಸಂಯೋಜನೆಯಲ್ಲಿ ವಾತಾವರಣದ ಅಂತಃ ಸತ್ಯವನ್ನು ಅಭಿವ್ಯಕ್ತಿಗೊಳಿಸುವ  ಕೌಶಲ ಕಾಣಬಹುದು. ``ಮಾತು ಕಡಿಮೆ, ಕೆಲಸ ಅಧಿಕ ಇವರ ಧ್ಯೇಯವಾಕ್ಯ. ಅದರಂತೆ ಯಾವುದೇ ಷಾಟ್ ಚಿತ್ರೀಕರಿಸಲು ಶೀಘ್ರಗತಿಯಲ್ಲಿ ಸಿದ್ಧಪಡಿಸುವಲ್ಲಿ ಸಿದ್ಧಹಸ್ತರು.							
(ಶ್ರೀಕೃಪಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ